ಪೇಟರ್, ವಾಲ್ಟರ್ ಹೊರೇಷಿಯೊ
1839-1894. ಇಂಗ್ಲಿಷ್ ವಿಮರ್ಶಕ, ಕಾದಂಬರಿಕಾರ. ಹುಟ್ಟಿದ್ದು ಲಂಡನ್ನಿನಲ್ಲಿ. ತಂದೆ ಡಚ್ ಮನೆತನಕ್ಕೆ ಸೇರಿದ ರಿಚರ್ಡ್ ಗ್ಲೋಡ್ ಪೇಟರ್. ವೈದ್ಯ. ಆತ ಸತ್ತ ಬಳಿಕ ಕುಟುಂಬ ಎನ್‍ಫೀಲ್ಡಿಗೆ ಬಂದು ನೆಲೆಸಿತು. ಓದಿದ್ದು ಕ್ಯಾಂಟರ್ಬರಿಯ ಕಿಂಗ್ಸ್ ಶಾಲೆಯಲ್ಲಿ, ಅನಂತರ ಆಕ್ಸ್‍ಫರ್ಡಿನ ಕ್ವೀನ್ಸ್ ಕಾಲೇಜಿನಲ್ಲಿ. ಪದವಿ ಪಡೆದ ಮೇಲೆ ಆಕ್ಸ್‍ಫರ್ಡಿನಲ್ಲೆ ನೆಲೆಸಿ ಮನೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳತೊಡಗಿದ. 1864 ರಲ್ಲಿ ಬ್ರೇಸ್ನೋಸಿನ ಫೆಲೋ ಆಗಿ ಆಯ್ಕೆಯಾದ. ಆಗಲೆ ಸಾಹಿತ್ಯ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯತೊಡಗಿದ್ದ. ಹೀಗೆ ಬರೆದ ಮೊದಲ ಲೇಖನಗಳಲ್ಲಿ ಕೋಲ್‍ರಿಜ್ ಕವಿಯನ್ನು ಕುರಿತ ಲೇಖನ ವೆಸ್ಟ್‍ಮಿನ್‍ಸ್ಟರ್ ರಿವ್ಯೂನಲ್ಲಿ ಪ್ರಕಟವಾಗಿ (1866) ವಿದ್ವಾಂಸರ ಗಮನ ಸೆಳೆಯಿತು. ಜಾನ್‍ರಸ್ಕಿನನ ಪ್ರಭಾವಕ್ಕೊಳಗಾಗಿ ಸೌಂದರ್ಯ ಮೀಮಾಂಸೆಯನ್ನು ಅಭ್ಯಸಿಸಿ ಅದರಲ್ಲಿ ಪ್ರಭುತ್ವ ಸಂಪಾದಿಸಿದ. ಮರುವರ್ಷ ಘಾರ್ಟ್‍ನೈಟ್ಲಿ ರಿವ್ಯೂನಲ್ಲಿ ಪ್ರಕಟವಾದ ಈಸ್ತೆಟಿಕ್ ಪೊಯೆಟ್ರಿ-ಒಂದು ಅಧ್ಯಯನ ಎಂಬ ಲೇಖನ ಹೆಸರು ತಂದಿತು. ಅನಂತರ ಲಿಯೊನಾರ್ಡೋ ಡ ವಿಂಚಿ ಸಾಂಡ್ರೊಬೋಟಿಸೆಲ್ಲಿ, ಪಿಕೊಡೆಲ್ಲಾ ಮಿರಾಂಡೋಲಾ, ಮೈಕಲೇಂಜಲೊ - ಇವರ ಜೀವನ ಮತ್ತು ಕಲಾಸಾಧನೆಗಳನ್ನೊಳಗೊಂಡ ವ್ಯಕ್ತಿಚಿತ್ರಗಳ ಲೇಖನ ಸರಣಿಯೇ ಹೊರಬಂತು. ಹೀಗೆ ಬರೆದ ಇನ್ನೂ ಕೆಲವು ಪ್ರಬಂಧಗಳೊಡನೆ ಇವನ್ನೆಲ್ಲ ಸೇರಿಸಿ 1878ರಲ್ಲಿ ಸ್ಟಡೀಸ್ ಇನ್ ದಿ ಹಿಸ್ಟರಿ ಆಫ್ ರಿನೇಸಾನ್ಸ್ ಎಂಬ ಹೆಸರಿನ ಸಂಕಲನ ಪ್ರಕಟವಾಯಿತು.

ಈ ವೇಳೆಗೆ ಸಾಹಿತ್ಯ, ಕಲೆ ಎರಡೂ ಕ್ಷೇತ್ರಗಳಲ್ಲಿ ಒಳ್ಳೆಯ ವಿಮರ್ಶಕ ಎಂಬ ಹೆಸರುಗಳಿಸಿ ಆಕ್ಸ್‍ಫರ್ಡಿನ ಸಾಹಿತ್ಯ ಗೋಷ್ಠಿಯ ಕೇಂದ್ರ ವ್ಯಕ್ತಿಯಾದ. ಪ್ರಿರ್ಯಾಫಲೈಟ್ ಗುಂಪಿನ ಸಾಹಿತಿಗಳೆಲ್ಲ ಈತನ ಮಿತ್ರ ಬಳಗದವರಾದರು ಏಕಾಂತಪ್ರಿಯನೂ ಮಿತಭಾಷಿಯೂ ಆಗಿದ್ದು ಈತ ಜನರೊಡನೆ ಹೆಚ್ಚು ಬೆರೆಯುತ್ತಿರಲಿಲ್ಲ. ಆದರೂ ಅನೇಕ ಶಿಷ್ಯರ, ಅನುಯಾಯಿಗಳ ಆರಾಧ್ಯ ಪುರುಷನಾದ. ಅವರೆಲ್ಲರೂ ಆಗತಾನೆ ಪ್ರಕಟವಾದ ಈತನ ಮೇರಿಯಸ್ ದಿ ಎಪಿಕ್ಯೂರಿಯನ್ ಎಂಬ ರಮ್ಯ ಕಾದಂಬರಿಯನ್ನು ದಿವ್ಯವಾದ ಕೃತಿ ಎಂದು ಹಾಡಿ ಹೊಗಳಿದರು. 1885ರಲ್ಲಿ ಪ್ರಕಟವಾದ ಈ ಪುಸ್ತಕ ಸಾಹಿತ್ಯ ಲೋಕಕ್ಕೆ ಒಂದು ಚಿರಸ್ಮರಣೀಯವಾದ ಕಾಣಿಕೆ. ನಿಜಕ್ಕೂ ಶ್ರೇಷ್ಠ ಕೃತಿ. ಸೊಗಸಾದ ಚೊಕ್ಕ ಬರಹ. ಮಾರ್ಕಸ್ ಆರಿಲಿಯನ್ಸನ ಕಾಲದ ಲ್ಯಾಟಿನ್ ಬುದ್ಧಿಜೀವಿ ಯುವಕನೊಬ್ಬನ ಕತೆ. ಸುಂದರವಾದ ನವುರಾದ ಕನಸಿನಂತಿರುವ ಈ ಕಲ್ಪನಾ ಕಥೆ ಎಲ್ಲೂ ರಭಸದ ಓಟ, ವೇಗ ಇಲ್ಲದೆ ಮಂದಗತಿಯಲ್ಲಿ ಸಾಗುತ್ತದೆ. ಆ ಪ್ರಾಚೀನ ಕಾಲದ ವಾತಾವರಣ ತದ್ವತ್ತಾಗಿ ಮೂಡಿಸುತ್ತದೆ. ಕಾವ್ಯದ ನಯ, ಭಾವತೀವ್ರತೆಗೆ ಹತ್ತಿರವಾದ ಪರಿಪೂರ್ಣವಾದ ಅಭಿವ್ಯಕ್ತಿ ಎನಿಸುವ ಸೊಗಸಾದ ಗದ್ಯಶೈಲಿಯನ್ನಿಲ್ಲಿ ಕಾಣಬಹುದು. ಸೌಂದರ್ಯಾನ್ವೇಷಣೆಯ ಪ್ರಾಮುಖ್ಯವನ್ನು ಈ ಕೃತಿ ಸಾರುತ್ತದೆ. 

ಹೀಗೆಯೇ ದಿ ಚೈಲ್ಡ್ ಇನ್ ದಿ ಹೌಸ್ (1894) ಎಂಬುದು ಇನ್ನೊಂದು ರಮ್ಯ ಕಾದಂಬರಿ. ಸುಂದರವಾದ, ಕರುಣಾರಸಭರಿತವಾದ ಈ ಕಥೆ ಆತ್ಮಕಥನ ರೂಪದಲ್ಲಿದೆ. ಈ ಎರಡು ಕೃತಿಗಳಲ್ಲೂ ಲೇಖಕನ ಆತ್ಮವೃತ್ತ ಮತ್ತು ವ್ಯಕ್ತಿತ್ವಗಳ ಹಲವಾರು ಅಂಶಗಳು ಕಾಣುತ್ತವೆ.

1887ರಲ್ಲಿ ಇಮ್ಯಾಜಿನರಿ ಪೋರ್ಟೇಯ್ಟ್ಸ್ ಎಂಬ ಪುಸ್ತಕ ಪ್ರಕಟವಾಯಿತು. ಇದು ತಾತ್ತ್ವಿಕ ನೆಲೆಗಟ್ಟಿನ ಕಲ್ಪನಾ ಸೃಷ್ಟಿ. ಪ್ರಬಂಧ ಸಂಕಲನ. 1889ರಲ್ಲಿ ಅಪ್ರಿಸಿಯೇಷನ್ಸ್ ಮತ್ತು ವಿತ್ ಎನ್ ಎಸ್ಸೇ ಆನ್ ಸ್ಟೈಲ್ : 1893ರಲ್ಲಿ ಪ್ಲೇಟೋ ಅಂಡ್ ಪ್ಲೇಟೋನಿಸಮ್ ಎಂಬ ಉತ್ಕøಷ್ಠ ಕೃತಿಗಳು ಹೊರಬಂದುವು. ಈತನ ಮರಣಾನಂತರ ಗ್ರೀಕ್ ಸ್ಟಡೀಸ್ ಮತ್ತು ಮಿಸಲೇನಿಯಸ್ ಸ್ಟಡೀಸ್ 1895ರಲ್ಲೂ ಗ್ಯಾಸ್ಟನ್ ಡಿ ಲೆಟೂರ್ 1896ರಲ್ಲೂ ಎಸ್ಸೇಸ್ ಫ್ರಮ್ ದಿ ಗಾರ್ಡಿಯನ್ 1897ರಲ್ಲೂ ಪ್ರಕಟವಾದುವು. 1901ರಲ್ಲಿ ಈತನ ಕೃತಿಗಳ ಸಂಪೂರ್ಣ ಸಂಕಲನ ಪ್ರಕಟವಾಯಿತು. 

ಕೆನ್ಸಿಂಗ್ಟನಿನಲ್ಲಿ ಅನಂತರ ಆಕ್ಸ್‍ಫರ್ಡಿನಲ್ಲಿ ಇದ್ದನಾದರೂ ಈತನ ಕೃತಿಗಳೆಲ್ಲ ಬರೆಯಕ್ಕಿಳಿದದ್ದು ಬ್ರೆಸ್ಯೋಸಿನಲ್ಲಿದ್ದ ಈತನ ಖಾಯಂ ಅಧ್ಯಯನ ಕೊಠಡಿಯೊಂದರಲ್ಲಿ. ಈತನ ಬರವಣಿಗೆ ಸ್ಫೂರ್ತಿಯಲ್ಲಿ ಸುಲಲಿತವಾಗಿ ಅನಾಯಾಸವಾಗಿ ಬಂದುದಲ್ಲ. ಚಿಂತಿಸಿ ಬರೆದು ಹೊಡೆದು ಮಾಡಿ, ಪ್ರಜ್ಞಾಪೂರ್ವಕವಾಗಿ ಕಷ್ಟಪಟ್ಟು ತಿದ್ದಿತೀಡಿ ಆದಮೇಲೆ, ಕೊನೆಗೊಂದು ರೂಪ ಪಡೆದುಕೊಂಡಂಥವು ಪದವಿಟ್ಟಳಿಸದೊಂದಗ್ಗಳಿಕೆ ಎಂದೂ ಈತನದಾಗಲಿಲ್ಲ.

ಈತ ಎಲ್ಲದರಲ್ಲೂ ಅಚ್ಚುಕಟ್ಟು. ಮಿತಭಾಷಿಯಾದರೂ ವ್ಯಂಗ್ಯ, ಹಾಸ್ಯ ಜಾಣ್ಮೆಗಳಿಂದ ಕೂಡಿದ ಪ್ರಭಾವಶಾಲಿ ಮಾತುಗಾರ. ಸೌಜನ್ಯಶೀಲ, ಸರಳವಾದ ಅಭಿರುಚಿಯುಳ್ಳವನಾದರೂ ಕಲಾವಂತಿಕೆಯನ್ನು ಸೌಂದರ್ಯವನ್ನು ಗುರುತಿಸಿ ಮೆಚ್ಚುವಂಥವ, ಸದಾ ಚಿಂತನ, ಆಲೋಚನೆಗಳಲ್ಲಿ ಮಗ್ನವಾಗುವ ಸ್ವಭಾವದವನಾಗಿದ್ದುದರಿಂದ ತನ್ನ ವ್ಯಕ್ತಿತ್ವವನ್ನು ಬರಹದಲ್ಲಿ ಸಂಪೂರ್ಣವಾಗಿ ವ್ಯಕ್ತಪಡಿಸಲು ಈತನಿಗೆ ಸಾಧ್ಯವಾಗಲಿಲ್ಲ. ಇಂಗ್ಲಿಷಿನ ಗದ್ಯಕ್ಕೆ ಈತ ಒಂದು ಹೊಸ ತಿರುವನ್ನು ಕೊಟ್ಟ. ಮೋಹಕವಾದ ವರ್ಣ, ಇಂಪಾದ ನಾದ ಎರಡೂ ಬೆರೆತ ಗದ್ಯಶೈಲಿ ಈತನ ಕೊಡುಗೆ. ಆದರೆ, ಗಾಂಭೀರ್ಯವನ್ನೂ ಸುಂದರವಾದ ನುಡಿಗಟ್ಟುಗಳನ್ನೂ ಮೆಚ್ಚುವ ಕೆಲವರಿಗೆ ಮಾತ್ರ ಈ ಶೈಲಿ ಹಿಡಿಸಬಹುದು. ಜನಸಾಮಾನ್ಯರಿಗೆ ಹೃದ್ಯವಾದುದಲ್ಲ.

ಹೃತ್ಪೂರ್ವಕವಾಗಿ ಬಂದ ಸಹಜವಾದ ಸತ್ಯವಾದ ಭಾವ, ಅಂತರಂಗದಿಂದ ಮೂಡಿಬಂದ ಶ್ರದ್ಧೆ-ಇವಿಲ್ಲದ ಸಾಹಿತ್ಯ ಎಂದೂ ಚಿರಂತನ ಕೃತಿಯಾಗಲಾರದು ಎಂಬುದು ಈತನ ಖಚಿತ ಅಭಿಪ್ರಾಯ. ವಿಮರ್ಶಾತತ್ತ್ವ ಸೌಂದರ್ಯ ಮೀಮಾಂಸೆಗಳನ್ನು ಅಭಿವ್ಯಕ್ತಿಸುವ ಈತನ ಕೃತಿಗಳು ಅಮೂಲ್ಯವಾಗಿರುವುದು ವಿಚಾರ ಶ್ರೀಮಂತಿಕೆ, ಭಾಷಾ ಪ್ರೌಢಿಮೆಗಳ ಜೊತೆಗೆ ಗಹನವೂ ಶ್ರದ್ಧಾಪೂರ್ಣವೂ ಆದ ಜೀವನ ತತ್ತ್ವಗಳೂ ಸೇರಿರುವುದರಿಂದ, ಜೀವನವೇ ಒಂದು ಉತ್ಕøಷ್ಟವಾದ ಕಲಾಕೃತಿಯಾಗಬೇಕು ಎಂದು ಇವು ಸಾರುವುದರಿಂದ.

ಪರಮೋನ್ನತವಾದ ಚೈತನ್ಯದೊಂದಿಗೆ ಬೆರೆತ ಆನಂದದಲ್ಲಿ ಮಾಣಿಕ್ಯದ ಪ್ರಭೆಯಂತೆ ಬೆಳಗುತ್ತ ಬಾಳಬೇಕು ಎನ್ನುವ ಈತನ ಮಾತು ಆದರ್ಶ ಪ್ರಿಯರಿಗೊಂದು ಚಿರಂತನ ಸ್ಫೂರ್ತಿ.

ಈತನಿಗೆ ಚಿಕ್ಕಂದಿನಿಂದಲೂ ದೇವರು ಧರ್ಮ ಎಂಬ ಹುಚ್ಚು. ಇನ್ನಷ್ಟು ಕಾಲ ಈತ ಬದುಕಿದ್ದಿದ್ದರೆ ಕ್ರೈಸ್ತಮಠದಲ್ಲಿ ಸಂನ್ಯಾಸ ಸ್ವೀಕಾರ ಮಾಡಬೇಕೆಂಬ ತನ್ನ ಬಾಲ್ಯದ ಆಸೆಯನ್ನು ಬಹುಶಃ ಈಡೇರಿಸಿಕೊಳ್ಳುತ್ತಿದ್ದ. ಆದರೆ ನಡುಪ್ರಾಯದವನಾಗಿರುವಾಗಲೇ ಈತ ತೀರಿಕೊಂಡ. ಸಾಯುವುದಕ್ಕೆ ಕೆಲವೇ ತಿಂಗಳ ಹಿಂದೆ ಗ್ಲಾಸ್ಗೊ ವಿಶ್ವವಿದ್ಯಾನಿಲಯ ಎಲ್.ಎಲ್.ಡಿ. ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನಿತ್ತು ಈತನನ್ನು ಗೌರವಿಸಿತು.
(ಕೆ.ಬಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ